Wednesday 22 August 2012

ಮದುವೆ

ನಮ್ಮ ಜೀವನದ ಪಟ್ಟಣದಲಿ 
ಪಟ್ಟು ಹಿಡಿದು ಕನಸುಗಳ ಒಟ್ಟುಮಾಡಿ 
ಪುಟ್ಟದೊಂದು ಗೂಡು ಕಟ್ಟಿ 
ಕಟ್ಟಿದ ಗೂಡನು ಒಂದು ಶುಭ್ಹದಿನದಲಿ
ಹೊಸ ಬಾಳಿನ ಮಂಟಪಕ್ಕೆ ಕೈ ಹಿಡಿದು ನೆಡೆಸುವುದು.

ಪ್ರೀತಿಯ ಪರಿಧಿಯೊಳಗೆ ಪಯಣಿಸಿ,
ಪ್ರೇಮದ ಪಲ್ಲಕ್ಕಿಯನು ಹೊತ್ತು,
ಬಾಳ ಪುಟದೊಳಗೆ ಅವಳಿ ಮನಸುಗಳ ಕನಸುಗಳಿಗೆ
ನನಸಿನ ಹಾದಿಯ ತೋರಿಸಲು 
ಬಾವನೆಗಳೊಡನೆ ಸ್ಪಂದಿಸಲು
ಜೊತೆಗೂಡಿ ನೆಡೆಯಲು 
ಒಂದು ಶುಭಘಳಿಗೆಯಲಿ ಹೆಜ್ಜೆ ಹಾಕುವುದು.


ಭವಿಷ್ಯದ ಹಾದಿಗೆ ಬೆಳದಿಂಗಳ ಬೆಳಕ ಹರಿಸಲು...
ಬಾಳ ದಾರಿಯಲಿ ಬಣ್ಣದ ಚಿತ್ತಾರ ಬಿಡಿಸಿ,
ಬದುಕಿನ ಸಂತೆಯಲಿ ಸುಖ, ದು:ಖ, ಕಷ್ಟ ಕಾರ್ಪಣ್ಯಕ್ಕೆ,
ಜೋಡಿ ಕಣ್ಣುಗಳೊಡನೆ ಬದುಕಿನ ಸಂತೆಗೆ...
ಜೋಡಿ ಹೆಜ್ಜೆಗಳೊಡನೆ ಶುಭ ಮೂಹೂರ್ತದಲ್ಲಿ
ಎರಡು ಜೀವದ ಜೀವನಕ್ಕೆ ಸೇತುವೆಯಂತಾಗಲು
ಬಂಧ ಬೆಸೆಯುವುದು. ಮದುವೆಯ ಈ ಬಂಧ.

Friday 1 April 2011

ಹೆಣ್ಣು

ತೂಗುವ ತೊಟ್ಟಿಲಲ್ಲಿ ಲಾಲಿ ಹಾಡು ಹೇಳಿ,
ತನ್ನ ಪ್ರಾಣದೊಡನೆ ಪರದಾಡಿ
ತನ್ನೊಲವಿನ ಬುತ್ತಿಯನು ಬಡಿಸಿ
ಲೋಕಕ್ಕೊಂದು ಪ್ರಜೆಯನ್ನು ಪರಿಚಯಿಸುವಳು
ತಾಯಿಯಾಗಿ.

ಹೆತ್ತವರೆತ್ತರಕ್ಕೆ......
ಅವರು ಹರಿಸಿದ ಪೀತಿಯ ಕೋಡಿಗೆ
ಹಂಗಿಲ್ಲದೆ ಹೆಜ್ಜೆಹಾಕಿ ಮಗಳಾಗಿ ಬೆಳೆದು
ಕಾಲದ ಕಾರ್ಯದಂತೆ.....
ಅವರೊಡಲ ಪ್ರೀತಿಯಿಂದ....
ಜನ್ಮಿಸಿದವರರಮನೆಯಿಂದ....
ಇನಿಯನೆದೆಯ ಪ್ರೀತಿಯ ಅಂಕುರಕ್ಕೆ
ಅವನರಮನೆಗೆ... ಅವನ ಬದುಕಿನ
ಕಾವ್ಯವ ಕೃತಿಕರಿಸಲು ಕುಲವಧುವಾಗಿ
ತನ್ನ ಕನಸಿನ ತೇರೆಳೆಯಲು ಇನಿಯನೊಡಗೂಡುವಳು.

ಬಾಲ್ಯದಲ್ಲಿ ಕದನ, ಕಲಹ,
ಕೋಪ, ತಾಪ, ಸಂತಾಪಕೆ, ಸಹಕರಿಸಿ
ಸಹಗಾರ್ತಿಯಾಗಿ, ಸಲುಗೆಯಿಂದ
ಅಣ್ಣತಮ್ಮಂದಿರೊಡನೆ.....
ಅಕ್ಕರೆಯ ಅಕ್ಕನಾಗಿ ಮುದ್ದಿನ ತಂಗಿಯಾಗಿರುವಳು.
ಕಂಡ ಕನಸನ್ನು ಕಾರ್ಯಗತಗೊಳಿಸಲು,
ಅದರ ಹಾದಿಯಲಿ ಹೆಜ್ಜೆಯನಿಡಲು,
ಸುಖದ ಸುಪ್ಪತ್ತಿಗೆಯ ಪಥದಲ್ಲಿ ಸಾಗುತಿರಲು,
ಅಸೂಯೆಯಿಲ್ಲದೆ ಸಹೃದಯದಿಂದ
ಆ ಸುಖ ಶಾಶ್ವತವಾಗಿರಲೆಂದು ಹರಸುವಳು.
ದು:ಖದ ದುಮ್ಮಾನಕೆ,
ದುಗುಡ ಕಂಡ ಬದುಕಿನಲ್ಲಿ ಸಹಭಾಗಿಯಾಗಿ
ಸಮಾಧಾನವ ದಾನವಾಗಿ ಕೊಡುವಳು....
ಸ್ನೇಹಿತೆಯಾಗಿ.

ನೀಲಿಬಾನಲಿ ಮೂಡಿದೊಂದು ಮೋಡವು
ವರುಣನಿಗೆ ಶರಣಾಗಿ ವರ್ಷಬಿಂದುವಾಗಿ
ಬರ ಕಂಡ ಭುವಿಗೆ ಮುತ್ತಿಕ್ಕಿದಂತೆ
ಪ್ರೀತಿಯ ಸೆಲೆ ಕಾಣದ ಪೋರನೊಬ್ಬನ ಮನದಲ್ಲಿ
ಪ್ರೀತಿಯ ಪರದೆಯೆಳೆದು
ಅದಕ್ಕೊಂದು ಪರಿಧಿಯ ಹಾಕುವಳು.....
ಪ್ರೇಯಸಿಯಾಗಿ. 

ಹಸನಾದ ಹೊಂಬಿಸಿಲಂತೆ.......
ಕೊನೆಗಾಣದ ಕಡಲಿನಲೆಯಂತೆ.......... 
ಮಮತಾ ಮಂಜರಿ 
ಹೆಣ್ಣು.

Saturday 26 March 2011

ನನ್ನ ಹುಡುಗಿ

ನಯನದಂಚಿನ ಶಯನದಲಿ,
ನಕ್ಕು, ನಲಿದು, ನರ್ತಿಸಿ,
ಕನಸಿನ ನಕಾಶೆ ಹಚ್ಚಿ, ನಮ್ರವಾಗಿ.....
ನಡು ತಿರುಗಿಸಿ ಹೋದಾಕೆ...
ಯಾರೀಕೆ?
ನಾಕಾಣೆ ನನಸಲಿ
ನನ್ನರಸಿಯ ಮೊಗವ
ಕನಸಲೇ ಕಾಡುತಿಹಳು...
ನನಸಲಿ ಬಾರದೆ
ಯಾರಾಗಿರುವಳೋ ಈಕೆ?
ನೇಹದ ನಿಶಾನಿ ಹಾರಿಸಿ,
ನೀರಧಿಯ ಅಲೆಯಂತೆ...
ನನ್ನ ಕಾಡುತಿಹಳು...

ನಿಶ್ಚಿಂತಳಾಗಿ ನನ್ನೆದೆಯ
ನಿವಾಸಿಯಾಗಿರುವಳು.
ನಯನದಂಚಲಿ ನಿಗೂಢವಾಗಿರುವಾಕೆ
ಯಾರೀಕೆ?
ನನಸಲ್ಲಿ ಬರುವೆನೆಂದಳು..
ನಗು ಚೆಲ್ಲಿ ಹೋದಳು,
ಸ್ವಪ್ನದಾ ಸೊಕ್ಕಿಳಿಸಿ,
ಸ್ನೇಹಕ್ಕೆ ಸ್ಪೂರ್ತಿಯಾಗುವೆನೆಂದಳು.
ಸಖಿಯಾದಳು ನನ್ನೊಡಲಿಗೆ.
ಮಾತು ಮಾಣಿಕ್ಯದಂತೆ
ಮುನಿಸೆಂಬುದಿಲ್ಲ,
ಮಂಜಿನ ಹನಿಯಂತೆ, ಮಲ್ಲಿಗೆಯಂತೆ,
ಮಮತೆಯ ಮಂಟಪದಂತೆ,
ಮನದ ಭಾವನೆಗಳೆಲ್ಲಾ.


ಸ್ತಬ್ದವಾಗಿ, ಸ್ನಿಗ್ದವಾಗಿ,
ಸ್ಮ್ರತಿಯೊಳಗೆ ಸಿಲುಕಿದಳು,
ಸಂಯಮಿ, ಸವಿನಯೆ,
ಸುಕುಮಾರಿ, ಸುಭಾಷಿಣಿ,
ಸುಂದರಿ, ಸುಹಾಸಿನಿ,
ಮನಸೂರೆಗೊಂಡ ಈಕೆ.
ಈಕೆ........
ನನ್ನ ಹುಡುಗಿ......
ನಾ ಕಂಡ ಕನಸಿನ ಹುಡುಗಿ....
ನನ್ನೊಡಲಿನ ಬೆಡಗಿ....
ನನ್ನ ಕನಸಿನಿಂದ ಅಗಲುವ ಕಿನ್ನರಿ,
ಕಣ್ಮರೆಯಾಗುವ ಸೊಬಗಿ,
ನನಸಲಿ ಬರುವ ಮಾತುಹೇಳಿ
ಕನಸಲೇ ಉಳಿಯುವ ವೈಯಾರಿ.
ಈ ನನ್ನ ಹುಡುಗಿ......

Monday 14 March 2011

ಅನುಕೂಲಕ್ಕೊಂದು ಸಂಪರ್ಕ ಸಾಧನ


ಆಚರಿಸುವ ಶುಭಕಾರ್ಯಕ್ಕೆ,
ಆತ್ಮೀಯವಾಗಿ ಸವಿನಯದ ಆಮಂತ್ರಣವ;
ವಿನಯದಿ ಕೋರಲು....,
ಸಂಕಟದ ಸಂಭಾಷಣೆಗೆ...,
ವೇದನೆಯ ನಿವೇದನೆಗೆ...,
ವೃತ್ತಿ ಬದುಕಿನ ವಿವರಣೆಯ;
ವಿನ್ಯಾಸದ ವೇದಿಕೆಗೆ...,
ಸಡಗರದ ಸ್ಥಿರತೆಯ ಕಾಪಾಡಲು;
ಸ್ಮಾರಕವ ಸ್ಥಾಪಿಸಿ, ಹಂಚಿಕೆಯ ಹವಣಿಸಲು..,
ಪಣದಲ್ಲಿ ಗೆದ್ದ ಗೆಲುವಿಗೆ;
ಸಂಭ್ರಮದ ಛಾಯೆ ಮೂಡಿಸಲು...,
ಸೋತ ಸೋಲನು ಸೂಚಿಸಲು...,
ದ್ವೇಷವೆಂಬ ಕಿಚ್ಚಿನ ಕಿಡಿಗೆ,
ದರೋಡೆಯ ಜಾಲಕ್ಕೆ,
ಆ ಜಾಲ ಕಂಡ ಕಣ್ಮರೆಯ ಕಾಲುದಾರಿಗೆ
ಸಹಕರಿಸುವುದು...,
ಮೌನದ ಕದವ ತಟ್ಟಿ,
ಮನದ ಪಿಸುಮಾತನ್ನೆಲ್ಲಾ...,
ಪಿಸುಗುಡಲು....,
ಪರಿ ಪರಿಯಾಗಿ ವರ್ಣಿಸಲು...,
ಪರರ ಪರಿವೆಯಿಲ್ಲದೆ ಪೀತಿಸುವ ಮನದೊಳಗೆ
ಪ್ರೇಮ ಪರಿಧಿಯ ಪರ್ವವನಾಚರಿಸಲು.....


ಹೀಗೆ..............
ಹತ್ತು ಹಲವು, ಸಾವಿರ ಸಹಸ್ರಾರು
ಕಾರಣಗಳಿಗೆ ಸಂಚರಿಸುತ...
ಸುದ್ದಿಗಳ ನಿರ್ವಹಣೆಯ ನಿರ್ವಾಹಕನಂತೆ,
ಕಾರ್ಯ ನಿರ್ವಹಿಸುವ ಸಾಧಕ.


ಮಂಜಾನೆಯ ಶುಭೋದಯದಿಂದ...,
ಶಯನಕ್ಕೆ ಶುಭರಾತ್ರಿಯವರೆಗೆ. 

Wednesday 9 March 2011

ಮನದಲ್ಲೊಂದು ಕನಸಿನ ಗೂಡು


ಕಂಡ ಕನಸಿಗೆ...
ಕಾಮನಬಿಲ್ಲಿನ ಬಣ್ಣ ತುಂಬಿ,
ಕಲ್ಪನೆಯ ಕುಡಿಕೆಯಲ್ಲಿ ಕಾಪಾಡಿ,
ಕಣ್ಣ್ ಬಿಟ್ಟು ಕಾಣಬೇಕೆನ್ನುವಷ್ಟರಲ್ಲಿ..........
ಕಣ್ಣೀರ ಧಾರೆಯಿಂದ ತೋಯ್ದು ಹೋಗಿತ್ತು.
ಮನದ ಕನಸಿನ ಗೂಡು
ಮಣ್ಣಿನ ಪಾಲಾಗಿತ್ತು,
ಮನದ ಕಲ್ಪನೆಯ ಮಣ್ಣಿನ ಮಡಿಕೆಯಲ್ಲಿ......
ಕಣ್ಣ್ಮರೆಯಾಗಿತ್ತು.

Monday 7 March 2011

ಬಾಳಿನಾಸೆ


ಬಾಳಿಗೆ ಬಾನೆತ್ತರಕ್ಕೆ ಬಾಳುವಾಸೆ.





ನಿಲುಕದ ನಕ್ಷತ್ರವ ಕೈ ನಿಡಿದು
ಕರದೊಳಗೆ ಕಾಪಾಡುವಾಸೆ.
ಬಯಲಿನಲಿ ಬಿತ್ತುವ ಬೀಜವನ್ನೆಲ್ಲಾ......
ಮೊಳೆಸುವಾಸೆ.
ಕಾರ್ಮುಗಿಲ ಹನಿಯನ್ನೆಲ್ಲಾ...........
ಮನದೊಡಲ ಕಂಬನಿಗೆ ತಂಪಾಗಿ ಧಾರೆಯೆರೆವಾಸೆ.
ಬಾನಳತೆಯ ಲೆಕ್ಕಿಸದೆ ಬಾಳುವ ಬಾಳ್ವೆಗೆ...
ಮೊಳೆವ ಬೀಜದ ವ್ರಕ್ಷವ ಆಸರೆಯಾಗಿ ಆಲಂಗಿಸುವಾಸೆ.
ಕಣ್ಣೀರ್ ಸುರಿಸಿ ನೊಂದ ಮನಕೆ.....
ಕರದೊಳಗೆ ಕಾಪಾಡಿದ ನಕ್ಷತ್ರದ ಕಾಂತಿ ಕೊಡುವಾಸೆ.


ಬಾಳಿಗೆ ಸಾಗರದಲೆ ಕೊನೆಯಾಗುವವರೆಗೆ.......... 
ಕಣ್ಣ್ ಕಂಪಿಸದೆ ಕಾಣುವಾಸೆ.

Monday 28 February 2011

ಕಣ್ಣಂಚಿನ ಕಂಬನಿ


ನಿಶೆಯಲ್ಲಿ ಕಂಡ ಕನಸಿಗೆ 
ನಸುಕಿನಲಿ ನಲಿದಾಡಿ
ನನಸಾಗಿಸುವ ಮನದ ಕಲ್ಪನೆಗೆ ಓಗೊಟ್ಟು
ಕಂಗಳು ಕಲ್ಪಿಸಿದ ದಾರಿಯಲಿ ಸಾಗುತಿರಲು........
ಕಾಲ್ಪನಿಕವ ಕಲ್ಪಿಸಿತು ಕಾಲ.



ಮುಚ್ಚಿದ ಕಣ್ಣೊಳಗೆ ಕನಸು ಹೆಣೆದು
ಹೆಣೆದ ಕನಸಿನ ಹಾದಿ ಹಿಡಿದು,
ಆ ಕನಸಿಗೆ ನಸುಕಿನ ಕಿಚ್ಚಿಡಿದು,
ಆ ಹಾದಿ ಕವಲೊಡೆದು,
ಕವಲೊಡೆದ ದಾರಿಯಲಿ...........
ಕನಸಿನ ಹಾದಿಯಲಿ.............
ನನಸಾಗದ ಕನಸುಗಳಿಗೆ
ಕಣ್ಣಂಚಿನ ಕಂಬನಿ.