Saturday 26 March 2011

ನನ್ನ ಹುಡುಗಿ

ನಯನದಂಚಿನ ಶಯನದಲಿ,
ನಕ್ಕು, ನಲಿದು, ನರ್ತಿಸಿ,
ಕನಸಿನ ನಕಾಶೆ ಹಚ್ಚಿ, ನಮ್ರವಾಗಿ.....
ನಡು ತಿರುಗಿಸಿ ಹೋದಾಕೆ...
ಯಾರೀಕೆ?
ನಾಕಾಣೆ ನನಸಲಿ
ನನ್ನರಸಿಯ ಮೊಗವ
ಕನಸಲೇ ಕಾಡುತಿಹಳು...
ನನಸಲಿ ಬಾರದೆ
ಯಾರಾಗಿರುವಳೋ ಈಕೆ?
ನೇಹದ ನಿಶಾನಿ ಹಾರಿಸಿ,
ನೀರಧಿಯ ಅಲೆಯಂತೆ...
ನನ್ನ ಕಾಡುತಿಹಳು...

ನಿಶ್ಚಿಂತಳಾಗಿ ನನ್ನೆದೆಯ
ನಿವಾಸಿಯಾಗಿರುವಳು.
ನಯನದಂಚಲಿ ನಿಗೂಢವಾಗಿರುವಾಕೆ
ಯಾರೀಕೆ?
ನನಸಲ್ಲಿ ಬರುವೆನೆಂದಳು..
ನಗು ಚೆಲ್ಲಿ ಹೋದಳು,
ಸ್ವಪ್ನದಾ ಸೊಕ್ಕಿಳಿಸಿ,
ಸ್ನೇಹಕ್ಕೆ ಸ್ಪೂರ್ತಿಯಾಗುವೆನೆಂದಳು.
ಸಖಿಯಾದಳು ನನ್ನೊಡಲಿಗೆ.
ಮಾತು ಮಾಣಿಕ್ಯದಂತೆ
ಮುನಿಸೆಂಬುದಿಲ್ಲ,
ಮಂಜಿನ ಹನಿಯಂತೆ, ಮಲ್ಲಿಗೆಯಂತೆ,
ಮಮತೆಯ ಮಂಟಪದಂತೆ,
ಮನದ ಭಾವನೆಗಳೆಲ್ಲಾ.


ಸ್ತಬ್ದವಾಗಿ, ಸ್ನಿಗ್ದವಾಗಿ,
ಸ್ಮ್ರತಿಯೊಳಗೆ ಸಿಲುಕಿದಳು,
ಸಂಯಮಿ, ಸವಿನಯೆ,
ಸುಕುಮಾರಿ, ಸುಭಾಷಿಣಿ,
ಸುಂದರಿ, ಸುಹಾಸಿನಿ,
ಮನಸೂರೆಗೊಂಡ ಈಕೆ.
ಈಕೆ........
ನನ್ನ ಹುಡುಗಿ......
ನಾ ಕಂಡ ಕನಸಿನ ಹುಡುಗಿ....
ನನ್ನೊಡಲಿನ ಬೆಡಗಿ....
ನನ್ನ ಕನಸಿನಿಂದ ಅಗಲುವ ಕಿನ್ನರಿ,
ಕಣ್ಮರೆಯಾಗುವ ಸೊಬಗಿ,
ನನಸಲಿ ಬರುವ ಮಾತುಹೇಳಿ
ಕನಸಲೇ ಉಳಿಯುವ ವೈಯಾರಿ.
ಈ ನನ್ನ ಹುಡುಗಿ......

No comments: