Friday 1 April 2011

ಹೆಣ್ಣು

ತೂಗುವ ತೊಟ್ಟಿಲಲ್ಲಿ ಲಾಲಿ ಹಾಡು ಹೇಳಿ,
ತನ್ನ ಪ್ರಾಣದೊಡನೆ ಪರದಾಡಿ
ತನ್ನೊಲವಿನ ಬುತ್ತಿಯನು ಬಡಿಸಿ
ಲೋಕಕ್ಕೊಂದು ಪ್ರಜೆಯನ್ನು ಪರಿಚಯಿಸುವಳು
ತಾಯಿಯಾಗಿ.

ಹೆತ್ತವರೆತ್ತರಕ್ಕೆ......
ಅವರು ಹರಿಸಿದ ಪೀತಿಯ ಕೋಡಿಗೆ
ಹಂಗಿಲ್ಲದೆ ಹೆಜ್ಜೆಹಾಕಿ ಮಗಳಾಗಿ ಬೆಳೆದು
ಕಾಲದ ಕಾರ್ಯದಂತೆ.....
ಅವರೊಡಲ ಪ್ರೀತಿಯಿಂದ....
ಜನ್ಮಿಸಿದವರರಮನೆಯಿಂದ....
ಇನಿಯನೆದೆಯ ಪ್ರೀತಿಯ ಅಂಕುರಕ್ಕೆ
ಅವನರಮನೆಗೆ... ಅವನ ಬದುಕಿನ
ಕಾವ್ಯವ ಕೃತಿಕರಿಸಲು ಕುಲವಧುವಾಗಿ
ತನ್ನ ಕನಸಿನ ತೇರೆಳೆಯಲು ಇನಿಯನೊಡಗೂಡುವಳು.

ಬಾಲ್ಯದಲ್ಲಿ ಕದನ, ಕಲಹ,
ಕೋಪ, ತಾಪ, ಸಂತಾಪಕೆ, ಸಹಕರಿಸಿ
ಸಹಗಾರ್ತಿಯಾಗಿ, ಸಲುಗೆಯಿಂದ
ಅಣ್ಣತಮ್ಮಂದಿರೊಡನೆ.....
ಅಕ್ಕರೆಯ ಅಕ್ಕನಾಗಿ ಮುದ್ದಿನ ತಂಗಿಯಾಗಿರುವಳು.
ಕಂಡ ಕನಸನ್ನು ಕಾರ್ಯಗತಗೊಳಿಸಲು,
ಅದರ ಹಾದಿಯಲಿ ಹೆಜ್ಜೆಯನಿಡಲು,
ಸುಖದ ಸುಪ್ಪತ್ತಿಗೆಯ ಪಥದಲ್ಲಿ ಸಾಗುತಿರಲು,
ಅಸೂಯೆಯಿಲ್ಲದೆ ಸಹೃದಯದಿಂದ
ಆ ಸುಖ ಶಾಶ್ವತವಾಗಿರಲೆಂದು ಹರಸುವಳು.
ದು:ಖದ ದುಮ್ಮಾನಕೆ,
ದುಗುಡ ಕಂಡ ಬದುಕಿನಲ್ಲಿ ಸಹಭಾಗಿಯಾಗಿ
ಸಮಾಧಾನವ ದಾನವಾಗಿ ಕೊಡುವಳು....
ಸ್ನೇಹಿತೆಯಾಗಿ.

ನೀಲಿಬಾನಲಿ ಮೂಡಿದೊಂದು ಮೋಡವು
ವರುಣನಿಗೆ ಶರಣಾಗಿ ವರ್ಷಬಿಂದುವಾಗಿ
ಬರ ಕಂಡ ಭುವಿಗೆ ಮುತ್ತಿಕ್ಕಿದಂತೆ
ಪ್ರೀತಿಯ ಸೆಲೆ ಕಾಣದ ಪೋರನೊಬ್ಬನ ಮನದಲ್ಲಿ
ಪ್ರೀತಿಯ ಪರದೆಯೆಳೆದು
ಅದಕ್ಕೊಂದು ಪರಿಧಿಯ ಹಾಕುವಳು.....
ಪ್ರೇಯಸಿಯಾಗಿ. 

ಹಸನಾದ ಹೊಂಬಿಸಿಲಂತೆ.......
ಕೊನೆಗಾಣದ ಕಡಲಿನಲೆಯಂತೆ.......... 
ಮಮತಾ ಮಂಜರಿ 
ಹೆಣ್ಣು.

1 comment:

ವೆಂಕಟೇಶ್ ಹೆಗಡೆ said...

ನೈಸ್ ... ಹೆಣ್ಣಿನ ಜೀವನ ಚಕ್ರವನ್ನ ಚೆನ್ನಾಗಿ ಹೇಳೀದ್ದಿರ..